ಗಂಗಾವತಿ		
ಮೈಸೂರು ರಾಜ್ಯದ ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಕೇಂದ್ರ. ರಾಯಚೂರು ಜಿಲ್ಲೆಯ ಒಂದು ಕೊಪ್ಪಳ, ಯಲಬುರ್ಗಿ, ಕುಷ್ಟಗಿ, ಸಿಂಧನೂರು, ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ, ಹೊಸಪೇಟೆ ಇವು ಗಂಗಾವತಿಯನ್ನು ಬಳಸಿರುವ ತಾಲ್ಲೂಕುಗಳು. ಈ ತಾಲ್ಲೂಕಿನ ವಿಸ್ತೀರ್ಣ 513.9 ಚ.ಮೈ. ಜನಸಂಖ್ಯೆ 4,05,076 (2001). ತಾಲ್ಲೂಕಿನ 136 ಹಳ್ಳಿಗಳಿವೆ. ಈ ತಾಲ್ಲೂಕಿನ ದಕ್ಷಿಣದ ಅಂಚಿನಲ್ಲಿ ಈಶಾನ್ಯಭಿಮುಖವಾಗಿ ತುಂಗಭದ್ರಾ ನದಿ ಹರಿಯುತ್ತದೆ. ತುಂಗಾಭದ್ರಾ ನಾಲೆಯ ಪ್ರದೇಶದಲ್ಲಿರುವ ಗಂಗಾವತಿ ತಾಲ್ಲೂಕು ಹಸಿರು ಗದ್ದೆಗಳಿಂದಲೂ ತೋಟಗಳಿಂದಲೂ ಕೂಡಿದೆ. ಬತ್ತ, ಕಬ್ಬು ಇಲ್ಲಿಯ ಮುಖ್ಯ ಬೆಳೆಗಳು. ವರ್ಷದಲ್ಲಿ ಬತ್ತದ ಮೂರು ಬೆಳೆಗಳನ್ನು ತೆಗೆಯುವುದುಂಟು.

	ಕೊಪ್ಪಳ-ರಾಯಚೂರು ಮಾರ್ಗದಲ್ಲಿ ಕೊಪ್ಪಳದಿಂದ 30 ಮೈ ದೂರದಲ್ಲಿ ಗಂಗಾªತಿ ಪಟ್ಟಣವಿದೆ. ಗಂಗಾವತಿಗೆ 2 ಮೈ. ದೂರದಲ್ಲಿ  ತುಂಗಾಭದ್ರಾ ನದಿ ಪ್ರವಹಿಸುತ್ತದೆ. ತುಂಗಭದ್ರಾ ಯೋಜನೆ ಜಾರಿಗೆ ಬಂದ ಮೇಲೆ ಗಂಗಾವತಿ ಅಭಿವೃದ್ಧಿ ಕೇಂದ್ರವಾಗಿದೆ. ತುಂಗಭದ್ರಾ ಕಾಲುವೆಯೊಂದು  ಈ ಪಟ್ಟಣದ ಬಳಿ ಹಾದುಹೊಗಿದೆ. ಇಲ್ಲೊಂದು ಕೃಷಿ ಸಂಶೋಧನಾಲಯವುಂಟು. ಇಲ್ಲಿ ಎರಡು ಪ್ರೌಢಶಾಲೆಗಳೂ ಮೂರು ಪ್ರಾಥಮಿಕ ಶಾಲೆಗಳೂ ಇವೆ ಅಲ್ಲದೆ ಸಮೀಪದಲ್ಲಿ ಒಡ್ಡರಹಟ್ಟಿಯಲ್ಲಿ ಗ್ರಾಮಸೇವಕ ತರಬೇತು ಕೇಂದ್ರವುಂಟು. ಗಂಗಾವತಿಯಿಂದ ಪಶ್ಚಿಮಕ್ಕೆ ಒಂದೊವರೆ ಮೈಲಿ ದೂರದಲ್ಲಿ ಗುಡ್ಡವೊಂದರ ಮೇಲೆ ನಾಗಭದ್ರೇಶ್ವರ ದೇವಾಸ್ಥಾನವಿದೆ. ಇಲ್ಲಿ ಒಂದು ಫರ್ಲಾಂಗ್ ದೂರ ಸುರಂಗಮಾರ್ಗದಲ್ಲಿ ಕಾಲವೆ ಸಾಗುತ್ತದೆ. ಇದರ ಎತ್ತರ ಸುಮಾರು 19 ಇಲ್ಲಿ ನಿರ್ಮಿಸಿದ ಜಲಾಶಯದಿಂದ ಗಂಗಾವತಿ ಪಟ್ಟಣಕ್ಕೆ ನೀರಿನ ಪೊರೈಕೆಯಾಗುತ್ತದೆ.

	ಗಂಗಾವತಿ ಎಂಟು ಅಕ್ಕಿಗಿರಣಿಗಳೂ ಎರಡು ಖಂಡಸಾರಿ ಸಕ್ಕರೆ ಕಾರ್ಖಾನೆಗಳೂ ಉಂಟು. ಇದೊಂದು ವಾಣಿಜ್ಯ ಕೇಂದ್ರ. ಬೆಲ್ಲ, ಧಾನ್ಯ ಇಲ್ಲಿಯ ವ್ಯಾಪಾರ ಸರಕುಗಳು. ಮನೆಗಳು ಹೆಚ್ಚಾಗಿ ಕಲ್ಲಿನವು.

	ಇಲ್ಲಿ ನಗರೇಶ್ವರ ದೇವಾಲಯಗಳಿವೆ. ಆದರೆ ಇವುಗಳಲ್ಲಿ ಹೇಳಿ ಕೊಳ್ಳುವಂಥ ಶಿಲ್ಪವೈಭವವೇನೂ ಇಲ್ಲ. ಗಂಗಾವತಿಗೆ ಒಂದು ನಗರಸಭೆ ಇದೆ. ಹಿಂದೊಮ್ಮೆ ಸಣ್ಣ ಹಳ್ಳಿಯಾಗಿದ್ದ ಗಂಗಾವತಿ ಇಂದು ದೊಡ್ಡ ಪಟ್ಟಣವಾಗಿದೆ. ಜನ ಸಂಖ್ಯೆ 1,01,397 (2001). ನೆರೆಹೊರೆಯ ಹಿರೇಜಂತಗಲ್, ಹೊಸಹಳ್ಳಿ, ಜಂಗಮರ ಕಲ್ಗುಡಿ, ದೇಸಾಯಿ ಕ್ಯಾಂಪ್, ಹಿರೂರು ಒಡ್ಡರಹಟ್ಟಿ ಇವು ಇಂದು ಗಂಗಾವತಿಯಲ್ಲಿ ಸಮಾವೇಶಗೊಂಡಿವೆ.

	ಆನೆಗೊಂದಿ ಈ ತಾಲ್ಲೂಕಿನ ಒಂದು ಇತಿಹಾಸಪ್ರಸಿದ್ಧ ಸ್ಥಳ. ಇದು ಗಂಗಾವತಿ ಪಟ್ಟಣದ ದಕ್ಷಿಣಕ್ಕೆ ಒಂಬತ್ತು ಮೈ. ದೂರದಲ್ಲಿದೆ. 						           	          (ಎಸ್.ವಿ.ಪಿಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ